ಕೂಡಲಿ ಗ್ರಾಮವು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಒಂದು ಸಿದ್ಧಿಕ್ಷೇತ್ರ. ಇಲ್ಲಿ ತುಂಗಾ ಮತ್ತು ಭದ್ರಾ ಈ ಎರಡು ನದಿಗಳ ಸಂಗಮವಾಗುತ್ತದೆ. ಪುರಾಣಗಳಲ್ಲಿ ಈ ಎರಡು ನದಿಗಳನ್ನು “ಯುಗಳ ನದಿ” ಅಥವಾ “ಯಮಳ ನದಿ” ಎಂದು ಕರೆದಿದ್ದಾರೆ. ಹಾಗಾಗಿ ಈ ಊರನ್ನು “ಯಮಳಪುರಿ” ಎಂದೂ ಕರೆದಿದ್ದಾರೆ. ಸಂಗಮದ ನಂತರ ಈ ನದಿ “ತುಂಗಭದ್ರಾ” ಎಂದೇ ಕರೆಯಲ್ಪಟ್ಟಿದೆ. ಕೂಡಲಿ ಕ್ಷೇತ್ರದ ಮಹಿಮೆಯು ಸ್ಕಾಂದ ಪುರಾಣ, ಭವಿಷ್ಯೋತ್ತರ ಪುರಾಣ, ಹಾಗೂ ಬ್ರಹ್ಮಾಂಡ ಪುರಾಣಗಳಲ್ಲಿ ವರ್ಣಿಸಲ್ಪಟ್ಟಿದೆ.
ಇದೇ ಪುರಾಣದಲ್ಲಿ ಈ ನದಿಯ ಹುಟ್ಟಿನ ಬಗ್ಗೆಯೂ ಕಥೆ ಇದೆ. ಶ್ರೀ ವಿಷ್ಣುವು ವರಾಹರೂಪವನ್ನು ಧರಿಸಿ ಅವತಾರ ಮಾಡಿ ಹಿರಣ್ಯಾಕ್ಷನನ್ನು ಸಂಹರಿಸುತ್ತಾನೆ. ಅನಂತರ ಅವನು ಸಹ್ಯಾದ್ರಿಪರ್ವತಪ್ರದೇಶಕ್ಕೆ ಬಂದು ವರಾಹರೂಪವನ್ನು ತ್ಯಜಿಸಿ, ಭಗವದ್ರೂಪವನ್ನು ಹೊಂದುತ್ತಾನೆ. ಈ ಸ್ಥಳವನ್ನು 'ವೇದಪಾದ' ಎಂದು ಕರೆಯುತ್ತಾರೆ. (ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ, ಈಗಿನ ಕುದುರೆಮುಖ ಗಣಿ ಪ್ರದೇಶದಲ್ಲಿ ವೇದಪಾದ ಎಂದು ಕರೆಸಿಕೊಂಡಿರುವ ಸ್ಥಳವೂ, ವರಾಹಮೂಲ ಎಂಬ ಪ್ರದೇಶವೂ ಇವೆ). ಅಲ್ಲಿ ವರಾಹದ ಅಂದರೆ ಹಂದಿಯ ದಾಡೆಗಳ ಆಕೃತಿಯಲ್ಲಿರುವ ಬಂಡೆಗಳಿಂದ ಈ ಎರಡು ನದಿಗಳು ಹುಟ್ಟಿ ಬರುತ್ತವೆ.
ಶ್ರೀ ಕೂಡಲಿ ಕ್ಷೇತ್ರ
ಪೂರ್ವ ಕಾಲದಲ್ಲಿ, ಅಂದರೆ, ತುಂಗಾ ಮತ್ತು ಭದ್ರೆ ನದಿಗಳು ಉಗಮ ಆಗುವುದಕ್ಕೂ ಮುಂಚಿನ ಕಾಲದಲ್ಲಿ ಈಗಿನ ಸಂಗಮ ಪ್ರದೇಶದಲ್ಲಿ, ಪ್ರಾಚೀನ ಒಂದು ಸರೋವರವಿತ್ತು. ಅದರ ಸುತ್ತ ಅನೇಕ ಋಷಿಗಳ ಮತ್ತು ಮುನಿಗಳ ಆಶ್ರಮಗಳಿದ್ದವು. ಅವರೆಲ್ಲರೂ ನಿರಂತರ ಧ್ಯಾನಪರಾಯಣರೂ, ತ್ರಿಕಾಲಜ್ಞಾನಿಗಳು, ವೇದವಿದರೂ ಆಗಿದ್ದರು. ಒಮ್ಮೆ ಶ್ರೀಮನ್ನಾರಾಯಣನು ಗರುಡನನ್ನೇರಿ, ಸಿದ್ಧಗಂಧರ್ವರೊಡನೆ, ಭೂಲೋಕದತ್ತ ಬರುತ್ತಿದ್ದಾಗ, ಈ ಪ್ರದೇಶದಲ್ಲಿದ್ದ ಋಷಿಮುನಿಗಳನ್ನು ನೋಡುತ್ತಾನೆ. ಇಲ್ಲಿನ ಮಂಗಳ ಸನ್ನಿವೇಶದಿಂದ ಆಕರ್ಷಿತನಾದ ಅವನು ಬ್ರಾಹ್ಮಣ ವೇಷವನ್ನು ಧರಿಸಿ, ಸರೋವರದ ಬಳಿ ಬಂದು ನಿಲ್ಲುತ್ತಾನೆ. ಇವನೊಂದಿಗೆ ಬಂದ ಸಿದ್ಧರೂ ಗಂಧರ್ವರೂ ಗರುಡನೂ ಆ ಬ್ರಾಹ್ಮಣನ ಅನುಚರರಾಗಿ ಬಂದು ನಿಲ್ಲುತ್ತಾರೆ. ಆಗಂತುಕರಾಗಿ ಬಂದ ಬ್ರಾಹ್ಮಣನನ್ನೂ, ಅವನ ಅನುಚರರನ್ನೂ ಋಷಿಗಳು ಅರ್ಘ್ಯಪಾದ್ಯಾದಿಗಳಿಂದ ಸ್ವಾಗತಿಸಿ, ಅವರ ಆಗಮನಕ್ಕೆ ಕಾರಣವನ್ನು ಕೇಳುತ್ತಾರೆ. ಆಗ ಬ್ರಾಹ್ಮಣನು - 'ನಾನು ಶ್ವೇತದ್ವೀಪವಾಸಿ, ಋಷಿಗಳ ದರ್ಶನ ಪಡೆಯುತ್ತಾ ಅನುಚರರೊಂದಿಗೆ ಸಂಚರಿಸುತ್ತಿದ್ದೇನೆ.
ಇಲ್ಲಿ ನಿಮ್ಮ ಮುನಿಸಮಾಜವನ್ನೂ, ಕಮಲಗಳಿಂದ ತುಂಬಿರುವ ಈ ಸರೋವರವನ್ನೂ, ಮರಗಿಡ ಬಳ್ಳಿಗಳಿಂದ ಪ್ರಶಾಂತವಾದ ಈ ಪ್ರದೇಶವನ್ನೂ ನೋಡಿ ನನಗೆ ಈ ಒಂದು ದಿನ ಇಲ್ಲಿ ಉಳಿಯಬೇಕೆಂಬ ಅಪೇಕ್ಷೆಯುಂಟಾಗಿದೆ. ಆದ್ದರಿಂದ ಇಲ್ಲಿಗೆ ಬಂದಿದ್ದೇನೆ' ಎಂದು ಹೇಳುತ್ತಾನೆ. ಅವನ ಮಾತುಗಳನ್ನು ಕೇಳಿ ಋಷಿಗಳಿಗೆ ಬಹಳ ಸಂತೋಷವಾಗುತ್ತದೆ. ಅಷ್ಟೇ ಅಲ್ಲ, ಆ ಋಷಿಗಳು ತ್ರಿಕಾಲ ಜ್ಞಾನಿಗಳಾದ್ದರಿಂದ ಈ ಬ್ರಾಹ್ಮಣನು ಶ್ರೀಮನ್ನಾರಾಯಣನೆಂಬುದನ್ನೂ, ಅನುಚರರು ಸಿದ್ಧಗಂಧರ್ವರು ಎಂಬುದನ್ನೂ ತಕ್ಷಣವೇ ತಿಳಿದುಕೊಳ್ಳುತ್ತಾರೆ. ಅನಂತರ ಅವರನ್ನೆಲ್ಲ ಭಕ್ತಿಯಿಂದ ಗೌರವಿಸಿ ಸ್ತುತಿಸುತ್ತಾರೆ.
ಋಷಿಗಳ ಭಕ್ತಿಗೆ ಮೆಚ್ಚಿದ ನಾರಾಯಣನು ಸಹಚರರೊಂದಿಗೆ ನಿಜರೂಪದಿಂದ ಕಾಣಿಸಿಕೊಳ್ಳುತ್ತಾನೆ. ಆ ದಿವ್ಯ ಮಂಗಳ ರೂಪವನ್ನು ಕಂಡ ಋಷಿಗಳು ಇನ್ನೂ ಹೆಚ್ಚಾದ ಅನನ್ಯತೆಯಿಂದ ಅವನನ್ನು ಸ್ತುತಿಸಿ - 'ನಮ್ಮ ಪ್ರದೇಶವು ನಿನ್ನ ಪಾದ ಸ್ಪರ್ಶದಿಂದ ಪುನೀತವಾಗಿದೆ. ಆದ್ದರಿಂದ ನಿನ್ನ ಪಾದಚಿಹ್ನೆಗಳನ್ನು ಈ ಸರೋವರದ ದಡದಲ್ಲಿ ಬಿಟ್ಟು ಹೋಗು' ಎಂದು ಪ್ರಾರ್ಥಿಸುತ್ತಾರೆ.
ಪ್ರಾಚೀನ ಋಷ್ಯಾಶ್ರಮ ಹಾಗೂ ಹರಿಹರ ಕ್ಷೇತ್ರ
'ಹಾಗೆಯೇ ಆಗಲಿ' ಎಂದು ಹೇಳಿದ ನಾರಾಯಣನು ತನ್ನ ಪಾದಚಿಹ್ನೆಗಳ ಪಕ್ಕದಲ್ಲಿ ಶಿವನ ಪಾದ ಚಿಹ್ನೆಗಳೂ ಇರುವುದನ್ನು ಋಷಿಗಳಿಗೆ ತೋರಿಸುತ್ತಾನೆ. ಶಿವನ ಪಾದ ಚಿಹ್ನೆಗಳು ಅಲ್ಲಿ ಹೇಗೆ ಬಂದವು ಎಂದು ಋಷಿಗಳು ಕೇಳಲು ನಾರಾಯಣನು - 'ಹಿಂದೆ ಬ್ರಹ್ಮಹತ್ಯಾ ದೋಷದ ನಿವಾರಣೆಗಾಗಿ, ಶಿವನು, ತ್ರಿಲೋಕಗಳನ್ನೂ ಸುತ್ತುತ್ತಿದ್ದಾಗ ಒಮ್ಮೆ ಈ ಸರೋವರದ ದಡದಲ್ಲಿ ಕುಳಿತು ವಿಶ್ರಮಿಸಿಕೊಂಡಿದ್ದನು. ಆಗ ಉಂಟಾದ ಪಾದ ಚಿಹ್ನೆಗಳು' ಎಂದು ಹೇಳಿ - 'ಇನ್ನು ಮುಂದೆ ಈ ಪ್ರದೇಶ ನನ್ನ ಮತ್ತು ಶಿವನ ಸಾನ್ನಿಧ್ಯದಿಂದ ಸದಾಕಾಲ ಪವಿತ್ರವಾಗಿರುತ್ತದೆ.
ಕೂಡಲಿ ಕ್ಷೇತ್ರದಲ್ಲಿರುವ ಶ್ರೀಶಾರದಾದೇವಿಯ ಪ್ರತಿಷ್ಠೆಯನ್ನು ಶ್ರೀ ಶಂಕರ ಭಗವತ್ಪಾದರೇ ಮಾಡಿದರೆಂದು ಹಲವಾರು ಐತಿಹಾಸಿಕ ಕಾವ್ಯಗಳ ಹಾಗೂ ಐತಿಹ್ಯಗಳ ಪ್ರಕಾರ ಹೇಳಿದೆ.
ಶ್ರೀ ಶಂಕರಭಗವತ್ಪಾದರು, ಬ್ರಹ್ಮನ ಅಪರಾವತಾರವಾದ ಮಂಡನಮಿಶ್ರರನ್ನೂ, ಸರಸ್ವತಿಯ ಅವತಾರ ರೂಪಳಾದ ಮತ್ತು ಸರ್ವವಿದ್ಯಾಪಾರಂಗತಳಾದ, ಮಂಡನ ಮಿಶ್ರರ ಪತ್ನಿಯಾದ ಉಭಯಭಾರತಿದೇವಿಯನ್ನು ವಾದದಲ್ಲಿ ಸೋಲಿಸಿದರು. ಮಂಡನ ಮಿಶ್ರರು ಸೋತು, ವಾದದ ಕರಾರಿನಂತೆ ಆಚಾರ್ಯರ ಶಿಷ್ಯರಾಗಿ ಸಂನ್ಯಾಸ ಸ್ವೀಕರಿಸಿ ಸುರೇಶ್ವರಾಚಾರ್ಯ ಎಂಬ ಹೆಸರನ್ನು ಪಡೆದರು. ತನ್ನ ಪತಿಯು ಸಂನ್ಯಾಸ ಗ್ರಹಣ ಮಾಡಿದ್ದರಿಂದ, ಉಭಯಭಾರತಿಯು ತನ್ನ ಲೋಕಕ್ಕೆ ಹೋಗಲು ಸಿದ್ಧಳಾದಳು. ಆಗ ಶಂಕರಭಗವತ್ಪಾದರು ಅವಳನ್ನು ಶ್ರೀ ವನದುರ್ಗಾಮಂತ್ರದಿಂದ ಒಲಿಸಿಕೊಂಡು, ತಾವು ದಕ್ಷಿಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ದಕ್ಷಿಣಾಮ್ನಾಯ ಪೀಠದಲ್ಲಿ ನೆಲಸುವಂತೆ ಪ್ರಾರ್ಥಿಸಿದರು.
ಇದಕ್ಕೆ ಒಪ್ಪಿದ, ಶಾರದೆಯು “ನಾನು ನಿಮ್ಮನ್ನು ಅನುಸರಿಸಿ ಬರುತ್ತೇನೆ. ನೀವು ನನ್ನನ್ನು ಹಿಂತಿರುಗಿ ನೋಡಬಾರದು. ಹಾಗೆ ನೋಡಿದಲ್ಲಿ, ನೋಡಿದ ಸ್ಥಳದಲ್ಲಿಯೇ ನಾನು ನೆಲೆ ನಿಲ್ಲುತ್ತೇನೆ'. ಎಂದಳು ಶ್ರೀ ಶಂಕರರು ಈ ನಿಬಂಧನೆಯನ್ನು ಒಪ್ಪಿಕೊಂಡು, ದಕ್ಷಿಣಕ್ಕೆ ಹೊರಟರು. ತುಂಗಭದ್ರಾ ಸಂಗಮದ ಬಳಿ ಬಂದಾಗ, ಶ್ರೀ ಶಂಕರರು ಈ ಪ್ರದೇಶದ ಶ್ರೇಷ್ಠತೆಯನ್ನು ಅರಿತು, ದಕ್ಷಿಣಾಮ್ನಾಯ ಪೀಠಕ್ಕೆ ಯೋಗ್ಯವಾದ ಸ್ಥಳವೆಂದು ಭಾವಿಸಿ ಹಿಂತಿರುಗಿ ನೋಡಿದರು.. ಅಲ್ಲಿಯೇ ದೇವಿಯು ಸನ್ನಿಹಿತಳಾಗಿ ನಿಂತುಬಿಟ್ಟಳು. ಆಚಾರ್ಯ ಶಂಕರರು ಹಾಗೆ ನಿಂತ ಭಂಗಿಯಲ್ಲಿಯೇ ಶಾರದಾಂಬೆಯನ್ನು ಅಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿದರು. ಹಾಗೆ ನಿಂತ ರೂಪದಲ್ಲಿರುವ ನಿಲುವಾಂಬೆಯಾದ ಶಾರದೆಯೇ ದಕ್ಷಿಣಾಮ್ನಾಯ ಪೀಠದ ಅಧಿದೇವತೆಯಾದಳು. ಇಂದಿಗೂ ಸಹ ಇಲ್ಲಿ ಶಾರದೆಯನ್ನು ನಿಂತ ಭಂಗಿಯಲ್ಲಿಯೇ ಪೂಜಿಸಲಾಗುತ್ತಿದೆ.
ಶ್ರೀ ಶಾರದಾಂಬಾ ದೇವಸ್ಥಾನ
ಒಂದು ನೆರಳು ಶ್ರೀರಾಮನ ದೇಹದ ಆಕೃತಿಯನ್ನು ಅನುಕರಿಸುತ್ತಿತ್ತು. ಮತ್ತೊಂದು ಕಪಿಯ ಆಕೃತಿಯಂತಿತ್ತು. ಈ ದೃಶ್ಯವನ್ನು ಕಂಡು ಶ್ರೀರಾಮನಿಗೆ ಆಶ್ಚರ್ಯವೂ, ಆತಂಕವೂ ಉಂಟಾಗಿ, ವಸಿಷ್ಠರ ಬಳಿ ಬಂದು ವಿಷಯವನ್ನು ತಿಳಿಸುತ್ತಾನೆ. ಆಗ ಅವರು, ಆ ಕಪಿಯ ಆಕೃತಿಯ ನೆರಳು ವಾಲಿಯ ಪ್ರತಿರೂಪ ಎಂದು ತಿಳಿಸಿ, ಅತಿಶಯ ಹರಿಹರ ಕ್ಷೇತ್ರವಾದ ತುಂಗಭದ್ರಾ ಸಂಗಮಕ್ಷೇತ್ರದಲ್ಲಿ ಸ್ನಾನಮಾಡಿ ಶಿವಲಿಂಗವನ್ನು ಪ್ರತಿಷ್ಠಿಸಿ ಪೂಜಿಸಿದರೆ, ವಾಲಿಯ ಪ್ರೇತತ್ವ ಕಳೆಯುತ್ತದೆ ಎನ್ನುತ್ತಾರೆ. ತಕ್ಷಣವೇ ಶ್ರೀರಾಮನು ವಸಿಷ್ಠರನ್ನೂ ಜೊತೆಗೆ ಕರೆದುಕೊಂಡು ಯಮಳನದೀಕ್ಷೇತ್ರವಾದ ಕೂಡಲಿಗೆ ಬರುತ್ತಾನೆ. ತುಂಗಭದ್ರಾ ಸಂಗಮದಲ್ಲಿ ಸ್ನಾನ ಮಾಡಿ, ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾನೆ. ವಸಿಷ್ಠರು ಈ ಶಿವಲಿಂಗಕ್ಕೆ ಶ್ರೀರಾಮೇಶ್ವರ ಎಂದು ನಾಮಕರಣ ಮಾಡುತ್ತಾರೆ. ಆಮೇಲೆ ವಾಲಿಯ ಪ್ರೇತಕ್ಕೂ ಮೋಕ್ಷ ಸಿಕ್ಕು, ಅದು ಶ್ರೀರಾಮನನ್ನು ಬಿಟ್ಟು, ವಿಮಾನದಲ್ಲಿ ಕುಳಿತು ದೇವಲೋಕಕ್ಕೆ ಹೋಗುತ್ತದೆ. ಇಂದಿಗೂ ಸಹ ಪ್ರೇತಬಾಧೆಯಿಂದ ನರಳುವವರು ಸಂಗಮದಲ್ಲಿ ಸ್ನಾನಮಾಡಿ, ಭಕ್ತಿಯಿಂದ ಶ್ರೀರಾಮೇಶ್ವರನನ್ನು ಪೂಜಿಸಿದರೆ, ಈ ಬಾಧೆ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ.
ಶ್ರೀರಾಮೇಶ್ವರ
ಶ್ರೀರಾಮೇಶ್ವರ ದೇವಾಲಯದಲ್ಲಿ ಶ್ರೀ ಶಕ್ತಿ ಗಣಪತಿ ಮತ್ತು ಶ್ರೀ ಚಾಮುಂಡೇಶ್ವರಿ ದೇವತೆಗಳು ಇದ್ದಾರೆ. ಶ್ರೀರಾಮೇಶ್ವರ ಲಿಂಗವನ್ನು ಸ್ವತಃ ಶ್ರೀರಾಮನೇ ಪ್ರತಿಷ್ಠೆ ಮಾಡಿದನು ಎಂದು ಸ್ಕಾಂದ ಪುರಾಣ ಹೇಳುತ್ತದೆ. ಇದಕ್ಕೆ ಸಂಬನ್ಧಿಸಿದ ಐತಿಹ್ಯ ಹೀಗಿದೆ, ಪಟ್ಟಾಭಿಷೇಕದ ನಂತರ, ಅಯೋಧ್ಯೆಯಲ್ಲಿ ಶ್ರೀರಾಮನು ನ್ಯಾಯ-ಧರ್ಮಗಳಿಂದ ರಾಜ್ಯಭಾರ ಮಾಡುತ್ತಿದ್ದನು. ಒಂದು ದಿನ ಬೆಳಿಗ್ಗೆ, ಅವನು ಉದ್ಯಾನದ ಕಡೆ ಹೋಗುತ್ತಾನೆ. ಆಗ ಅವನು ಎರಡು ನೆರಳಿನ ರೂಪಗಳು ತನ್ನನ್ನು ಅನುಸರಿಸಿ ಬರುತ್ತಿರುವುದನ್ನು ನೋಡುತ್ತಾನೆ.
ಈ ಕ್ಷೇತ್ರದಲ್ಲಿರುವ ಶ್ರೀ ನರಸಿಂಹನನ್ನು ಪ್ರಹ್ಲಾದನೇ ಪ್ರತಿಷ್ಠಾಪಿಸಿದನೆಂದು ಭವಿಷ್ಯೋತ್ತರಪುರಾಣ ಹೇಳುತ್ತದೆ. ಈ ವಿಷಯವನ್ನು ಮತ್ತು ಈ ಕ್ಷೇತ್ರದ ಮಹಿಮೆಯನ್ನು ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಹೇಳಿದಂತೆಯೂ ಈ ಪುರಾಣ ಹೇಳುತ್ತದೆ.
ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನು ಸುಖಸಂತೋಷಗಳಿಂದ ರಾಜ್ಯಭಾರ ಮಾಡುತ್ತಿರುತ್ತಾನೆ. ಒಮ್ಮೆ ಅವನಿಗೆ, ಶ್ರೀ ವಿಷ್ಣುವಿಗೆ ಸಂಬಂಧಿಸಿದ ಮಹಾಮಂತ್ರೋಪದೇಶವನ್ನು ಪಡೆದು, ಅದರ ಪುರಶ್ಚರಣೆಯಿಂದ ವಿಷ್ಣುವನ್ನು ಮೆಚ್ಚಿಸಿ, ವಿಷ್ಣುವಿನ ಸಾನ್ನಿಧ್ಯವನ್ನು ಪಡೆಯಬೇಕು ಎಂಬ ಹಂಬಲವುಂಟಾಗುತ್ತದೆ. ಆಗ ಅವನು ಗಾಲವ ಋಷಿಗಳ ಬಳಿ ಅವನು - 'ವಿಷ್ಣು ಪದವನ್ನು ಸೇರುವಂತಹ ಮಂತ್ರೋಪದೇಶವನ್ನು ದಯಪಾಲಿಸಿ' ಎಂದು ಪ್ರಾರ್ಥಿಸುತ್ತಾನೆ. ಆಗ ಅವರು, ಶ್ರೀವಿಷ್ಣುವಿನ ಮೂಲಮಂತ್ರವನ್ನು ಉಪದೇಶಿಸಿ ಹರಿಹರ ಸಾನ್ನಿಧ್ಯದಿಂದ, ಬ್ರಹ್ಮತೀರ್ಥ, ವಿಷ್ಣು ತೀರ್ಥ ಮುಂತಾದ ಪವಿತ್ರ ತೀರ್ಥಗಳಿಂದ ಪುನೀತವಾದ ತುಂಗಭದ್ರಾ ಸಂಗಮ ಕ್ಷೇತ್ರದಲ್ಲಿ ಈ ಮಂತ್ರದ ಪುರಶ್ಚರಣೆಯನ್ನು ಮಾಡಿದರೆ, ಶೀಘ್ರವಾಗಿ ಸಿದ್ಧಿಯಾಗುತ್ತದೆ ಎಂದು ಹೇಳುತ್ತಾರೆ.
ಗಾಲವ ಋಷಿಗಳ ಮಾರ್ಗದರ್ಶನದಂತೆ ಪ್ರಹ್ಲಾದನು, ತುಂಗಭದ್ರಾ ನದಿಯ ಸಂಗಮ ಸ್ಥಾನವಾದ ಯಮಳಪುರಿಕ್ಷೇತ್ರಕ್ಕೆ (ಕೂಡಲಿ ಕ್ಷೇತ್ರ) ಬರುತ್ತಾನೆ. ಇಲ್ಲಿ ಸ್ನಾನ ಮಾಡಿ ವಿಧಿಪೂರ್ವಕವಾಗಿ ಪಿತೃತರ್ಪಣಾದಿಗಳನ್ನು ಕೊಟ್ಟು ದೇವತೆಗಳನ್ನು ಪೂಜಿಸುತ್ತಾನೆ. ಅನಂತರ ಗಾಲವ ಋಷಿಗಳಿಂದ ಉಪದಿಷ್ಟವಾದ ಶ್ರೀ ಲಕ್ಷ್ಮೀನರಸಿಂಹ ಮೂಲ ಮಂತ್ರವನ್ನು ಪುರಶ್ಚರಣೆ ಮಾಡುತ್ತಾ ಕುಳಿತುಕೊಳ್ಳುತ್ತಾನೆ. ಕೆಲವು ಕಾಲದ ನಂತರ ಜಲಮಧ್ಯೆ ನರಸಿಂಹನು ಶಾಲಗ್ರಾಮ ಶಿಲಾ ರೂಪದಲ್ಲಿ ದಿವ್ಯದರ್ಶನ ಕೊಡುತ್ತಾನೆ. ಅನಂತರ ಪ್ರಹ್ಲಾದನು ಆ ಮೂರ್ತಿಯನ್ನು ನೀರಿನಿಂದ ಹೊರ ತಂದು ಒಂದು ಕಡೆ ಇಟ್ಟು ಪೂಜಿಸುತ್ತಾನೆ. ಪ್ರಹ್ಲಾದನ ಭಕ್ತಿಗೆ ಮೆಚ್ಚಿದ ನರಸಿಂಹನು ಆ ಶಿಲಾಮೂರ್ತಿಯೊಳಗಿಂದ ಹೊರಬಂದು, ನಿಜರೂಪದಲ್ಲಿ ಕಾಣಿಸಿಕೊಂಡು, ವರ ಬೇಡುವಂತೆ ಹೇಳುತ್ತಾನೆ. ಆಗ ಪ್ರಹ್ಲಾದನು - 'ಜನ್ಮಜನ್ಮಾಂತರದಲ್ಲಿಯೂ ನಾನು ನಿನ್ನ ಭಕ್ತನಾಗಿರುವಂತೆ ಅನುಗ್ರಹಿಸು, ತುಂಗಭದ್ರಾ ಸಂಗಮ ಕ್ಷೇತ್ರದಲ್ಲಿ ಸದಾ ನಿನ್ನ ಸಾನ್ನಿಧ್ಯವಿರಲಿ, ಸದಾಕಾಲ ಎಲ್ಲರಿಗೂ ಮಂಗಳವನ್ನುಂಟು ಮಾಡು, ಯಾರು ನಿನ್ನನ್ನು ಸ್ಮರಿಸುತ್ತಾರೋ ಅಂತಹವರನ್ನು ಅವರ ಸಂಸಾರದ ಮತ್ತು ಮೃತ್ಯುವಿನ ಬಂಧನದಿಂದ ಬಿಡುಗಡೆ ಮಾಡಿ ಅವರಿಗೆ ಶಾಂತಿ ಲಭಿಸುವಂತೆ ಮಾಡು.' ಎಂದು ಪ್ರಾರ್ಥಿಸುತ್ತಾನೆ. ಶ್ರೀ ನರಸಿಂಹಸ್ವಾಮಿಯು ಹಾಗೆಯೇ ಆಗಲಿ ಎಂದು ವರವಿತ್ತು, ಆ ಶಾಲಗ್ರಾಮ ಶಿಲೆಯಲ್ಲಿಯೇ ಐಕ್ಯವಾಗುತ್ತಾನೆ. ಅನಂತರ ಪ್ರಹ್ಲಾದನು ಸಂತುಷ್ಟನಾಗಿ ತನ್ನ ರಾಜಧಾನಿಗೆ ಹಿಂತಿರುಗುತ್ತಾನೆ.
ಈ ಪುರಾಣ ಕಥೆಗೆ ಸೇರಿದಂತೆ, ಮತ್ತೊಂದು ಜನಜನಿತವಾದ ಕಥಾಭಾಗವೂ ಇದೆ. ಪ್ರಹ್ಲಾದನ ಭಕ್ತಿಗೆ ಮೆಚ್ಚಿದ ನರಸಿಂಹನು ಶಾಲಗ್ರಾಮ ಶಿಲೆಯಿಂದ ಹೊರಬಂದು ಮಾನವಾಕೃತಿ ವಿರಾಟ್-ರೂಪದಲ್ಲಿ ದರ್ಶನ ಕೊಡುತ್ತಾನೆ. ಆಗ ಪ್ರಹ್ಲಾದನು - 'ಮಾನವನು, ನಿನ್ನನ್ನು ಪೂಜಿಸಿ, ನಿನ್ನ ಕೃಪೆಗೆ ಪಾತ್ರನಾಗುವಂತಹ ಆಕೃತಿಯನ್ನು ಧರಿಸು.' ಎಂದು ಪ್ರಾರ್ಥಿಸುತ್ತಾನೆ. ಭಕ್ತನ ಪ್ರಾರ್ಥನೆಗೆ ಮೆಚ್ಚಿದ ನರಸಿಂಹನು ತನ್ನ ತಲೆಯ ಮೇಲೆ ಹಸ್ತವನ್ನು ಇಡು ಎಂದು ಸೂಚಿಸುತ್ತಾನೆ. ಆಗ ಪ್ರಹ್ಲಾದನು ಬಲಗೈಯನ್ನು ಮೇಲಕ್ಕೆ ಎತ್ತುತ್ತಾನೆ. ಅವನ ಕೈಗೆ ಎಟಕುವಂತೆ ಶ್ರೀಸ್ವಾಮಿಯು ಕುಬ್ಜಾವತಾರವನ್ನು ತಾಳಿ, ವೀರಾಸನದಲ್ಲಿ ಕುಳಿತುಕೊಳ್ಳುತ್ತಾನೆ. ಅನಂತರ ಪ್ರಹ್ಲಾದನು ಆನಂದಭರಿತನಾಗಿ ಶ್ರೀ ನರಸಿಂಹನ ತಲೆಯ ಮೇಲೆ ಅಂಗೈಯನ್ನು ಇಡುತ್ತಾನೆ. ಇಂದಿಗೂ ಈ ಶಿಲಾಮೂರ್ತಿಯ ನೆತ್ತಿಯ ಭಾಗವು ಚಪ್ಪಟೆಯಾಗಿದೆ. ಮಧ್ಯೆ ಸ್ವಲ್ಪ ಉಬ್ಬಾದ ಭಾಗವಿದೆ. ಅಲ್ಲಿ ಚಕ್ರದ ಚಿಹ್ನೆ ಇದೆ. ಪ್ರಹ್ಲಾದನ ಅಂಗೈಯಲ್ಲಿ ಚಕ್ರದ ಚಿಹ್ನೆಯಿತ್ತೆಂದೂ, ಆ ಚಿಹ್ನೆ ಇಲ್ಲಿ ಗುರುತಾಗಿದೆ ಎಂದೂ ಹೇಳುತ್ತಾರೆ. ಆದ್ದರಿಂದಲೇ ಈ ಮೂರ್ತಿಗೆ 'ಶಿರಶ್ಚಕ್ರಮೂರ್ತಿ' ಎಂದು ಮತ್ತೊಂದು ಹೆಸರು ರೂಢಿಗೆ ಬಂದಿತೆಂದೂ ಹೇಳುತ್ತಾರೆ. ಪ್ರಹ್ಲಾದನ ಪ್ರಾರ್ಥನೆಯಂತೆ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಭರವಸೆಯನ್ನು ಕೊಟ್ಟಿದ್ದರ ಚಿಹ್ನೆಯಾಗಿ ಶ್ರೀ ಮೂರ್ತಿಯ ಬಲಕೈಯಲ್ಲಿ 'ಚಿಂತಾಮಣಿ' ಇದೆ. ನರಸಿಂಹನೇ ಈ ಕ್ಷೇತ್ರದ ಅಧಿದೇವತೆ. ಆದ್ದರಿಂದಲೇ ಪುರಾಣಗಳಲ್ಲಿ ಕೂಡಲಿಯನ್ನು ಶ್ರೀ ನರಸಿಂಹಕ್ಷೇತ್ರ ಎಂದೂ ಕರೆದಿದ್ದಾರೆ.
ಚಿಂತಾಮಣಿ ನರಸಿಂಹ
ಪುರಾಣಗಳಲ್ಲಿ ಬ್ರಹ್ಮೇಶ್ವರ ದೇವರ ಸ್ಥಾಪನೆಯ ಬಗ್ಗೆ ಕಥೆಯಿದೆ. ಒಂದು ಸಲ ಬ್ರಹ್ಮನು ಶಿವನನ್ನು ಕುರಿತು ತಪಸ್ಸು ಮಾಡಲು ಸಂಕಲ್ಪಿಸಿ, ತುಂಗಭದ್ರಾ ಸಂಗಮಕ್ಷೇತ್ರಕ್ಕೆ ಬರುತ್ತಾನೆ. ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ನಿತ್ಯವೂ ಸಂಗಮದಲ್ಲಿ ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲಿಯೇ ಬಂದು ಶಿವಲಿಂಗವನ್ನು ಅರ್ಚಿಸುತ್ತಾನೆ. ಇಲ್ಲಿ ಅವನು ಮೂರುಸಾವಿರ ವರ್ಷಗಳವರೆಗೆ ಶಿವನನ್ನು ಪೂಜಿಸಿ ಸಿದ್ಧಿಯನ್ನು ಪಡೆಯುತ್ತಾನೆ. ಅಲ್ಲದೆ ಶಿವನು ಪ್ರತ್ಯಕ್ಷನಾಗಿ ಬ್ರಹ್ಮನ ಇಷ್ಟಾರ್ಥವನ್ನು ಸಲ್ಲಿಸುತ್ತಾನೆ. ಶಿವನು ಪ್ರತ್ಯಕ್ಷನಾದ ದಿನ ಆಶ್ಚಯುಜ ಶುಕ್ಲ ಪೌರ್ಣಮಿ. ಪ್ರತ್ಯಕ್ಷನಾದ ಶಿವನು 'ಆಶ್ಚಯುಜ ಶುಕ್ಲ ಪೌರ್ಣಮಿಯಂದು, ಆ ಸ್ಥಳದಲ್ಲಿ ಅಹೋ ರಾತ್ರಿ ನನ್ನ ಸಾನ್ನಿಧ್ಯವಿರುತ್ತದೆ. ಆ ದಿನ ನನ್ನನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳೂ ನೆರವೇರುತ್ತವೆ.
ಅಲ್ಲದೆ ಸೋಮವಾರ ಅಮಾವಾಸ್ಯೆ ಬಂದಾಗ, ಹಿಂದಿನ ಶನಿವಾರ ತ್ರಯೋದಶಿ ದಿನ ಹಗಲು ನಿರಾಹಾರಿಯಾಗಿದ್ದು ಸಾಯಂಕಾಲದಲ್ಲಿ ಈ ಬ್ರಹ್ಮೇಶ್ವರನನ್ನು ಪೂಜಿಸಿ, ಮಾರನೆಯ ಭಾನುವಾರ ಚತುರ್ದಶಿಯ ದಿನ ಪೂರ್ಣ ನಿರಾಹಾರಿಯಾಗಿದ್ದು, ಜಾಗರಣೆ ಮಾಡಿ, ಸೋಮವಾರ ಅಮಾವಾಸ್ಯೆಯ ಪ್ರಾತಃ ಕಾಲ ಕುಹೂಯೋಗದಲ್ಲಿ ಸಂಗಮಸ್ನಾನ ಮಾಡಿ ಆರ್ದ್ರ ವಸ್ತ್ರದಿಂದಲೇ ಬಂದು ಬ್ರಹ್ಮೇಶ್ವರನನ್ನು ಪೂಜಿಸಬೇಕು. ಹಾಗೆ ಮಾಡಿದವರು ಸರ್ವಸಿದ್ಧಿಗಳನ್ನೂ ಪಡೆಯುತ್ತಾರೆ'. ಎಂದು ಹೇಳಿ ಅಂತರ್ಧಾನನಾದನು. ಶಿವನು ಬ್ರಹ್ಮನಿಗೆ ಪ್ರತ್ಯಕ್ಷನಾದುದರ ನೆನಪಿಗಾಗಿ, ಇಂದಿಗೂ ಇಲ್ಲಿ ಆಶ್ಚಯುಜ ಶುಕ್ಲ ಪೌರ್ಣಮಿಯ ದಿನ ರಥೋತ್ಸವವನ್ನು ನಡೆಸುತ್ತಾರೆ.
ಬ್ರಹ್ಮೇಶ್ವರ
1. ವಿದ್ಯಾಶಂಕರ ದೇವಸ್ಥಾನ
2. ಚಂದ್ರಮೌಳೀಶ್ವರ
3. ಭವಾನೀಶಂಕರ ದೇವಸ್ಥಾನ
4. ಮಾತೃಭೂತೇಶ್ವರ (ಅಮ್ಮಾಜೀ ಸ್ವಾಮಿಗಳ ವೇದಿಕೆ)
5. ಕಿವುಡ ವೆಂಕಣ್ಣೇಶ್ವರ
6. ರಾಜಾರಾಮೇಶ್ವರ
7. ರಾಮಲಿಂಗೇಶ್ವರ
8. ಕಾಶೀ ವಿಶ್ವೇಶ್ವರ ದೇವಾಲಯ
9. ಸಂಗಮೇಶ್ವರ ದೇವಾಲಯ
10. ಆದಿ ಭೈರವನ ದೇವಸ್ಥಾನ
11. ರಾಮೇಶ್ವರ ದೇವಸ್ಥಾನ
ಕೂಡಲೀ ಕ್ಷೇತ್ರದಲ್ಲಿ ಮೇಲ್ಕಂಡ ಪ್ರಮುಖ ನಾಲ್ಕು ದೇವಾಲಯಗಳ ಹೊರತಾಗಿ, ಈ ಮೊದಲು ತಿಳಿಸಿದ ರಾಮೇಶ್ವರನೂ ಸೇರಿದಂತೆ ಒಟ್ಟು ಹನ್ನೊಂದು ಈಶ್ವರನ ಪ್ರಾಚೀನ ದೇವಾಲಯಗಳು ಈ ಕ್ಷೇತ್ರದಲ್ಲಿವೆ.
ಈ ಹನ್ನೊಂದು ಈಶ್ವರ ದೇವಾಲಯಗಳ ಹೊರತಾಗಿ ಪ್ರಮುಖ ದೇವತೆಗಳ ಸನ್ನಿಧಿಗಳು ಈ ಕೆಳಕಂಡಂತಿವೆ.
1. ಕೋದಂಡರಾಮಸ್ವಾಮಿ (ಶಾರದಮ್ಮನವರ ಆವರಣದಲ್ಲಿ)
2. ಕಾಲಭೈರವೇಶ್ವರ (ಭೈರವನ ಬೆಟ್ಟದ ಮೇಲೆ)
3. ಸ್ವಯಂವರ ಪಾರ್ವತೀ ಅಮ್ಮವನವರ ದೇವಸ್ಥಾನ (ಬ್ರಹ್ಮೇಶ್ವರನ ದೇವಸ್ಥಾನದ ಆವರಣದಲ್ಲಿ)
4. ದುರ್ಗಾ ದೇವಸ್ಥಾನ (ಗ್ರಾಮ ದೇವತೆ)