ಪೀಠದಲ್ಲಿರುವ ಜಗದ್ಗುರುಗಳು


ಜಗದ್ಗುರು ಮಹಾಸನ್ನಿಧಾನ
ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳು
71ನೇ ಪೀಠಾಧಿಪತಿಗಳು
ಜಗದ್ಗುರು ಸನ್ನಿಧಾನ
ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು
72 ನೇ ಪೀಠಾಧಿಪತಿಗಳು


ಶಾಲಿವಾಹನ ಶಕೆ 1906ನೇ ರಕ್ತಾಕ್ಷಿ ಸಂವತ್ಸರದ ಜೇಷ್ಠ ಶುದ್ಧ ದ್ವಾದಶಿ ( 10-6-1984) ಭಾನುವಾರ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮಿಗಳವರು, ಹಿರಿಯ ಶ್ರೀಗಳವರಾದ ಶ್ರೀ ವಿದ್ಯಾಭಿನವ ನೃಸಿಂಹ ಭಾರತಿ ಸ್ವಾಮಿಗಳವರ ಆಜ್ಞೆಯ ಮೇರೆಗೆ, ಶ್ರೀ ಶ್ರೀಪಾದರವರಿಗೆ ಶ್ರೀಮಠದ ಸಂಪ್ರದಾಯರೀತ್ಯಾ ಸಂನ್ಯಾಸ ದೀಕ್ಷೆಯನ್ನು ಕೊಟ್ಟು, ಮಹಾವಾಕ್ಯೋಪದೇಶವನ್ನು ನೀಡಿ, ಶ್ರೀವಿದ್ಯಾಭಿನವ ವಿದ್ಯಾರಣ್ಯ ಭಾರತಿಗಳು ಎಂದು ನಾಮಕರಣ ಮಾಡಿ, ತಮ್ಮ (ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮಿಗಳ) ನಂತರ ಶ್ರೀ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರು ಪೀಠದ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡರು. ಸಂಸ್ಕೃತದ ಪಂಚ ಮಹಾಕಾವ್ಯಗಳನ್ನು, ತರ್ಕ ಶಾಸ್ತ್ರಗಳನ್ನು , ಶಾಂಕರಭಾಷ್ಯ ಸಹಿತ ಉಪನಿಷತ್ತುಗಳನ್ನು, ಬ್ರಹ್ಮಸೂತ್ರವನ್ನು ಅಧ್ಯಯನ ಮಾಡಿದ್ದಾರೆ. ಸ್ವಯಂ ವ್ಯಾಸಂಗದಿಂದ, ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದವರು ನಡೆಸುವ ಸಂಸ್ಕೃತ ಎಂ.ಎ., ಪರೀಕ್ಷೆಗೆ ಕುಳಿತು 1999ರಲ್ಲಿ ಅಂತಿಮ ಎಂ.ಎ., ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ನಂತರ ಶ್ರೀಗಳವರು ಉನ್ನತ ಪದವಿಗಾಗಿ ಕುವೆಂಪು ವಿಶ್ವ ವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ, ಶಂಕರಾಚಾರ್ಯರ ಬಗ್ಗೆ ಪ್ರಬಂಧವನ್ನು ಮಂಡಿಸಿ ಪಿಹೆಚ್‌ಡಿ ಪದವಿ ಪಡೆದಿರುತ್ತಾರೆ.
ದಿನಾಂಕ 24-4-2017 ರಂದು (ಅಕ್ಷಯ ತೃತೀಯ ದಿನ) ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಬ್ರಹ್ಮೈಕ್ಯರಾದ ನಂತರ ಶ್ರೀ ಮಠದ ಭಕ್ತರ ಸಮ್ಮುಖದಲ್ಲಿ ಭವ್ಯವಾದ ಯೋಗ ಪಟ್ಟಾಭಿಷೇಕವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಚೈತನ್ಯಶ್ರಮದ ಶ್ರೀ ದತ್ತಾವಧೂತರು ಹಾಗೂ ಹರಿಹರಪುರ, ಶ್ರೀ ರಾಮಚಂದ್ರಾಪುರ, ಶ್ರೀ ಸ್ವರ್ಣವಲ್ಲೀ ಮಠಗಳ ಪ್ರತಿನಿಧಿಗಳು, ಅಗಡಿ ಆನಂದವನ ಮತ್ತಿತರರು ಉಪಸ್ಥಿತರಿದ್ದರು.
ಶೋಭಕೃತ್ ಸಂವತ್ಸರದ ಜ್ಯೇಷ್ಠ ಶುದ್ಧ ತೃತೀಯ, (22-05-2023ರ ಸೋಮವಾರದಂದು) ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿಗಳವರು ತಮ್ಮ ಶಿಷ್ಯರಾಗಿ ಹಾಗೂ ಶ್ರೀ ಮಠದ 72ನೇ ಉತ್ತರಾಧಿಕಾರಿಯಾಗಿ, ಶ್ರೀ ದತ್ತರಾಜ ದೇಶಪಾಂಡೆಯವರ (ಘನಪಾಠಿಗಳು) ಶಿಷ್ಯಪರಿಗ್ರಹಣವನ್ನು ಮಾಡಿಕೊಂಡರು. ಶ್ರೀಗಳವರು ಈ ತಮ್ಮ ಉತ್ತರಾಧಿಕಾರಿಗಳಿಗೆ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳವರು ಎಂದು ಯೋಗ ಪಟ್ಟವನ್ನು ಶ್ರೀ ಶಾರದಾಂಬಾ ದೇವಿಯ ಸನ್ನಿಧಿಯಲ್ಲಿ ನೆರೆದ ವಿಶಾಲ ಸಭೆಯಲ್ಲಿ ನೀಡಿರುತ್ತಾರೆ.
ಜಗದ್ಗುರು ಮಹಾಸನ್ನಿಧಾನ
ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳು






ಶ್ರೀ ಸಂಸ್ಥಾನದ 72ನೇ ಪೀಠಾಧಿಪತಿಗಳಾಗಿರುವ ಶ್ರೀ ಅಭಿನವ ಶಂಕರ ಭಾರತೀ ಸ್ವಾಮಿಗಳು ತಮ್ಮ ಪೂರ್ವಾಶ್ರಮದಲ್ಲಿ ಗುರುಕುಲದಲ್ಲಿ ವಾಸ ಮಾಡಿ ಋಗ್ವೇದ, ಯಜುರ್ವೇದ ಹಾಗೂ ಸಾಮವೇದಗಳನ್ನು ಅಭ್ಯಸಿಸಿದ್ದಾರೆ. ಅಲ್ಲದೇ ವೇದಾಂಗ, ಧರ್ಮಶಾಸ್ತ್ರ ಮುಂತಾದವುಗಳನ್ನು ಅಧ್ಯಯನ ಮಾಡಿದ್ದಲ್ಲದೇ, ಅಧ್ಯಾಪಕರಾಗಿಯೂ ಹಲವು ಪಂಡಿತರನ್ನು ತಯಾರು ಮಾಡಿದ್ದಾರೆ. ಕಾಶಿ, ಹರಿದ್ವಾರ, ಗುಜರಾತ್ ಮುಂತಾದ ಅನೇಕ ಸ್ಥಳಗಳಲ್ಲಿ ಆರು ವರ್ಷಗಳ ಕಾಲ ಸಂಚಾರ ಮಾಡಿ ಅನೇಕ ವಿದ್ವಾಂಸರಿಂದ ವಿವಿಧ ವಿದ್ಯೆಗಳನ್ನು ಅಭ್ಯಾಸ ಮಾಡಿದ್ದಾರೆ. ಕ್ರಿಯಾ ಯೋಗ ಪದ್ಧತಿಯ ಸಾಧಕರಾಗಿರುವ ಇವರು ಕಠಿಣ ಆಧ್ಯಾತ್ಮಿಕ ವಿಚಾರಗಳನ್ನು ಸರಳ ಪ್ರಬಂಧಗಳ ಮೂಲಕ ಬರೆದು ಅಪಾರ ಓದುಗರನ್ನು ತಲುಪಿದ್ದಾರೆ. ಇಂಡಾಲಜಿ ಕ್ಷೇತ್ರದಲ್ಲಿ ಸಂಶೋಧಕರಾಗಿ ಹಾಗೂ ಗುರುಕುಲ ಶಿಕ್ಷಣ ಪದ್ಧತಿಯ ಪುನರುತ್ಥಾನಕ್ಕಾಗಿ ದೇಶದೆಲ್ಲೆಡೆ ಸಂಚರಿಸಿದ್ದಾರೆ. ಈಗ ಸನ್ಯಾಸ ದೀಕ್ಷೆಯ ನಂತರ ಕೂಡಲಿ ಸಂಸ್ಥಾನವನ್ನು ಸನಾತನ ಧರ್ಮದ ಮಾರ್ಗದರ್ಶಕ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
ಜಗದ್ಗುರು ಸನ್ನಿಧಾನ
ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು
ಶ್ರೀಗಳು ಪೀಠವೇರಿದ ಅನತಿಕಾಲದಲ್ಲೇ ಶ್ರೀ ವಿದ್ಯಾಭಿನವ ವಾಲುಕೇಶ್ವರ ಭಾರತೀ ಗುರುಕುಲದ ಸ್ಥಾಪನೆ ಮಾಡಿದ್ದಾರೆ. ಈಗಾಗಲೇ ಅನೇಕ ವಿದ್ಯಾರ್ಥಿಗಳು ಪಾಠಶಾಲೆಗೆ ಸೇರ್ಪಡೆಗೊಂಡು ಅಧ್ಯಯನದ ಪ್ರಾರಂಭವಾಗಿದೆ. ದೇಶದ ವಿದ್ಯಾ ರಾಜಧಾನಿಯಾದ ಕಾಶಿಯಲ್ಲಿಯೇ ಪಾರಂಪರಿಕ ಶಿಕ್ಷಣ ಪದ್ಧತಿಯ ಕ್ಷೀಣತೆಯನ್ನು ಗಮನಿಸಿ, ಅದನ್ನು ಪುನರುದ್ಧಾರಗೊಳಿಸಲು ಶ್ರೀ ಸಚ್ಚಿದಾನಂದ ಶಂಕರ ಭಾರತೀ ವೇದ ಭವನ, ವಾರಾಣಸಿ (ಕಾಶಿ) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದಲ್ಲದೇ ನಮ್ಮ ಸಂಸ್ಕೃತಿಯ ಪ್ರಾಚೀನ ಕ್ರಮಗಳನ್ನು ಶುದ್ಧ ಕ್ರಮದಲ್ಲಿ ಆಚರಿಸಲು ಹಾಗೂ ಅತ್ಯಾಧುನಿಕ ಸಂಶೋಧನೆಗಳ ಬಲದಿಂದ ಪುಷ್ಟಿಗೊಳಿಸಿ ಸರ್ವರಿಗೂ ಇದರಲ್ಲಿ ಆಸ್ಥೆ, ಶ್ರದ್ಧೆ ಬೆಳೆಯಲೆಂದು ವಿಶ್ವೇಶ್ವರ ವೇದಶಾಸ್ತ್ರ ಸಂಶೋಧನಾ ಕೇಂದ್ರ, ವಾರಾಣಸಿ (ಕಾಶಿ) ಎಂಬ ಸಂಸ್ಥೆಯನ್ನು ಸಂಸ್ಥಾಪಿಸಿದ್ದಾರೆ. ಗೋರಕ್ಷಣೆ ಹಾಗೂ ಗೋವಿಕಾಸದ ಬಗ್ಗೆ ಸದಾ ಚಿಂತನೆ ನಡೆಸುವ ಶ್ರೀಗಳು ಕೂಡಲಿಯಲ್ಲಿ ಇರುವ ಭಾರತೀ ಗೋಶಾಲೆಯ ಕಾಯಕಲ್ಪದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.





