ಶ್ರೀಮದ್ ಜಗದ್ಗುರು ಶಂಕರಾಚಾರ್ಯ
ಕೂಡಲಿ ಶೃಂಗೇರಿ ಮಹಾಸಂಸ್ಥಾನ
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ
ಕೂಡಲಿ, ಶಿವಮೊಗ್ಗ, ಕರ್ನಾಟಕ
ಕ್ರಿ.ಶ. ೧೫೬೫ನೇ ಜನವರಿ ೨೩ರಂದು ಬಹಮನೀರಾಜ್ಯದ ಅರಸರಿಗೂ, ವಿಜಯನಗರದ ಅರಸರಿಗೂ ನಡೆದ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರದ ಅರಸರು ಸೋತಿದ್ದರಿಂದ, ವಿಜಯನಗರ ಸಾಮ್ರಾಜ್ಯವು ಸಂಪೂರ್ಣವಾಗಿ ನಿರ್ನಾಮವಾಯಿತು. ವಿಜಯನಗರದ ಸಾಮ್ರಾಜ್ಯದ ಎಲ್ಲೆಡೆ ಅರಾಜಕತೆಯುಂಟಾಯಿತು. ವಿಜಯನಗರದ ಅರಸರ ಭಕ್ತಿಗೌರವಗಳಿಗೆ ಪಾತ್ರವಾಗಿದ್ದ ಧರ್ಮಪೀಠಕ್ಕೂ ಧಕ್ಕೆಯುಂಟಾಯಿತು. ಇದೇ ಸಮಯದಲ್ಲಿ ಶೃಂಗೇರಿಯಲ್ಲಿದ್ದ, ಶ್ರೀ ತೃತೀಯ ನರಸಿಂಹ ಭಾರತಿಗಳ ಶಿಷ್ಯರೂ, ಶೃಂಗೇರಿ ಪೀಠದ ಅಧಿಪತಿಗಳೂ ಆಗಿದ್ದ ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮಿಗಳು ಕೂಡಲಿ ಕ್ಷೇತ್ರಕ್ಕೆ ಬಂದು ಇಲ್ಲಿದ್ದ “ಹಳೆಯ ಮಠ”ದಲ್ಲಿ ವಾಸ ಮಾಡಬೇಕಾದ ಪ್ರಸಂಗವೊದಗಿತು.
( “ಹಳೆಯ ಮಠ” ಎಂದು ಅನೇಕ ದಾಖಲಾತಿಗಳಲ್ಲಿ ಹಾಗೂ ಪುಸ್ತಕಗಳಲ್ಲಿ ಉಲ್ಲೇಖಿಸಲ್ಪಟ್ಟ, ಕೂಡಲಿಯಲ್ಲಿದ್ದ ಹಳೆಯ ಮಠವು ಯಾವಾಗ ನಿರ್ಮಾಣವಾಗಿದ್ದು, ಯಾರು ಸ್ಥಾಪಿಸಿದ್ದು, ಏತಕ್ಕಾಗಿ ಕಟ್ಟಿಸಿದ್ದು ಇತ್ಯಾದಿ ವಿಷಯಗಳು ಸಂಶೋಧನೆಗೆ ಒಳಪಡಬೇಕಾದ ಅಂಶವಾಗಿವೆ)
ಶ್ರೀ ವಿದ್ಯಾರಣ್ಯ ಭಾರತಿಗಳು ಶೃಂಗೇರಿಯನ್ನು ಬಿಟ್ಟು ಬಂದ ನಂತರ ಶೃಂಗೇರಿಯಲ್ಲಿದ್ದ ಸ್ಥಳೀಯ ಮಹಾಜನರೂ, ಸಂಸ್ಥಾನದ ಆಡಳಿತ ವರ್ಗದವರೂ, ಮಠದ ಶಿಷ್ಯರೂ ಸೇರಿ ಒಬ್ಬ ವ್ಯಕ್ತಿಗೆ ದೀಕ್ಷೆ ನೀಡಿ, ಅವರಿಗೆ ಶ್ರೀ ರಾಮಚಂದ್ರ ಭಾರತಿಗಳು ಹೆಸರಿಟ್ಟು, ಅವರನ್ನು ಶೃಂಗೇರಿಯ ಗುರುಪೀಠದ ಮೇಲೆ ಕುಳ್ಳಿರಿಸಿ ಪಟ್ಟಗಟ್ಟಿದರು. (ಸಂಕ್ಷಿಪ್ತ ಇತಿಹಾಸ).
ಕೆಲವು ಸಮಯದ ನಂತರ ಯಾತ್ರೆಗೆ ಹೋಗಿದ್ದ ಶ್ರೀ ತೃತೀಯ ನರಸಿಂಹ ಭಾರತಿ ಸ್ವಾಮಿಗಳು ಯಾತ್ರೆಯನ್ನು ಮುಗಿಸಿ ಕ್ರಿ.ಶ. ೧೫೭೬ನೆಯ ಧಾತೃ ಸಂವತ್ಸರದಲ್ಲಿ ಶೃಂಗೇರಿಗೆ ಮರಳಿ ಹೋಗುವ ಮಾರ್ಗದಲ್ಲಿ ಅವರಿಗೆ, ತಮ್ಮ ಪೀಠದಲ್ಲಿ ಈಗಾಗಲೇ ಬೇರೆಯವರು ಆಸೀನರಾಗಿದ್ದಾರೆ ಹಾಗೂ ತಮ್ಮ ಶಿಷ್ಯರಾದ ವಿದ್ಯಾರಣ್ಯ ಭಾರತಿಗಳು ಕೂಡ ಶೃಂಗೇರಿಯಲ್ಲಿಲ್ಲ ಎಂಬ ವರ್ತಮಾನ ತಿಳಿಯಿತು. ಆಗ ತೃತೀಯ ನೃಸಿಂಹ ಭಾರತಿಗಳು, ಶೃಂಗೇರಿಗೆ ಹೋಗದೇ ಶ್ರೀ ಕೂಡಲಿ ಕ್ಷೇತ್ರಕ್ಕೆ ಬಂದರು. ಆಗ ಇಲ್ಲಿ ಅವರಿಗೆ (ಹಳೆಯ ಮಠದಲ್ಲಿ ವಾಸ್ತವ್ಯ ಹೂಡಿದ್ದ) ತಮ್ಮ ಶಿಷ್ಯರಾಗಿದ್ದ ಶ್ರೀ ವಿದ್ಯಾರಣ್ಯ ಭಾರತಿಗಳ ಭೇಟಿಯಾಗಿ, ಶೃಂಗೇರಿಯಲ್ಲಿ ನಡೆದ ವಿಷಯವೆಲ್ಲವೂ ಪೂರ್ಣವಾಗಿ ತಿಳಿಯಿತು.
ಶ್ರೀ ತೃತೀಯ ನರಸಿಂಹ ಭಾರತಿ ಸ್ವಾಮಿಗಳು ಕೂಡಲಿಗೆ ಬಂದಿರುವ ವಿಷಯವನ್ನು ತಿಳಿದ ತರೀಕೆರ, ಕೆಳದಿ, ಬಸವಾಪಟ್ಟಣ, ಚನ್ನಗಿರಿ, ಚಿತ್ರದುರ್ಗ, ಹರಪನಹಳ್ಳಿ, ಸಂತೇಬೆನ್ನೂರು, ಮುಂತಾದ ಪಾಳೆಯಗಾರರು ಕೂಡಲಿಗೆ ಬಂದರು. ವಿಜಯನಗರ ಪತನವಾದ್ದರಿಂದ ವಿವಿಧ ರಾಜರನ್ನು ಹಾಗೂ ಪಾಳೆಯಗಾರರನ್ನು ಒಗ್ಗೂಡಿಸುವ ಒಂದು ಕೇಂದ್ರದ ಅಗತ್ಯ ಕಂಡದ್ದರಿಂದ, ಸ್ವಾಮಿಗಳಲ್ಲಿ ಎಲ್ಲರಿಗೂ ಭರವಸೆ ಕಂಡಿತು. ಶ್ರೀಗಳವರು ಶೃಂಗೇರಿಗೆ ಹೋಗಬೇಕಾದ ಆಗತ್ಯವಿಲ್ಲವೆಂದೂ, ಕೂಡಲಿಯಲ್ಲಿಯೇ ನೆಲೆಸಿ, ತಮ್ಮನ್ನು ಅನುಗ್ರಹಿಸಬೇಕೆಂದೂ ಪ್ರಾರ್ಥಿಸಿಕೊಂಡರು. ಅವರಿಗೆ ಬೇಕಾದ ಎಲ್ಲ ಅನುಕೂಲಗಳನ್ನು ಇಲ್ಲಿಯೇ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಈ ವೇಳೆಗಾಗಲೇ ಶೃಂಗೇರಿಯ ಪೀಠಕ್ಕೆ ಮತ್ತೊಬ್ಬ ಪೀಠಾಧಿಪತಿಗಳನ್ನು ನೇಮಿಸಿಕೊಂಡಿರುವುದು ತಿಳಿದಿತ್ತಾದ್ದರಿಂದ ಶ್ರೀ ನರಸಿಂಹ ಭಾರತಿಗಳು ಕೂಡಲಿಯಲ್ಲಿಯೇ ನೆಲೆಸುವ ದೃಢ ನಿರ್ಧಾರ ಮಾಡಿದರು.
ಶ್ರೀ ನರಸಿಂಹ ಭಾರತಿಗಳ ಈ ನಿರ್ಧಾರದಿಂದ ಸಂತೋಷಗೊಂಡ, ಬಸವಾಪಟ್ಟಣದ ಪಾಳೆಯಗಾರನಾದ ಹನುಮಪ್ಪನಾಯಕನು, ಕೂಡಲಿಯಲ್ಲಿ ಹಳೆಯ ಮಠವಿದ್ದ ಜಾಗದಲ್ಲಿ ದೊಡ್ಡ ಮಠವನ್ನೂ ಶ್ರೀ ವಿದ್ಯಾಶಂಕರ ದೇವಾಲಯವನ್ನೂ ಹೊಸತಾಗಿ ಕಟ್ಟಿಸಿಕೊಟ್ಟನು. ಶ್ರೀ ಮಠದ ನಿತ್ಯ ಕೈಂಕರ್ಯಗಳಿಗಾಗಿ ಸಾಕಷ್ಟು ಭೂಮಿಯನ್ನು ಮಠಕ್ಕೆ ದಾನವಾಗಿ ಕೊಟ್ಟನು. ಅಲ್ಲದೆ ಮಠದ ಸಿಬ್ಬಂದಿ ವರ್ಗದವರ ವಾಸಕ್ಕಾಗಿ ಕೆಲವು ಮನೆಗಳನ್ನು ಕಟ್ಟಿಸಿಕೊಟ್ಟರು. ಹಾಗಾಗಿ ಶ್ರೀ ನರಸಿಂಹ ಭಾರತಿ ಸ್ವಾಮಿಗಳವರು ಶಾಲಿವಾಹನ ಶಕೆ ೧೪೯೮ನೆಯ ಧಾತೃಸಂವತ್ಸರದ ಕಾರ್ತಿಕ ಶುಕ್ಲಪ್ರತಿಪತ್, ಬಲಿಪಾಡ್ಯಮಿ, ಸೋಮವಾರ (ಕ್ರಿ.ಶ. ೧೫೭೬ ಅಕ್ಟೋಬರ್ ೨೬) ಸುಮುಹೂರ್ತದಲ್ಲಿ ಕೂಡಲಿ ಕ್ಷೇತ್ರದಲ್ಲಿ, ದಕ್ಷಿಣಾಮ್ನಾಯ ಜಗದ್ಗುರು ಪೀಠವನ್ನು ಸ್ಥಾಪಿಸಿದರು. ಇದರ ನೆನಪಿಗಾಗಿ ಇಂದಿಗೂ ಶ್ರೀ ಕೂಡಲಿ ಕ್ಷೇತ್ರದಲ್ಲಿರುವ ಶ್ರೀ ಮಠದಲ್ಲಿ ಪ್ರತಿವರ್ಷ ಕಾರ್ತಿಕ ಶುದ್ಧ ಪ್ರತಿಪದೆಯ ದಿನ ಮಹಾಪೂಜೆ, ಮಹಾಭಿಷೇಕ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಂದಿನಿಂದ ಇಂದಿನ ವರೆಗೆ ಈ ಪೀಠದಲ್ಲಿ ಯತಿಗಳ ಪರಂಪರೆಯು ಮುಂದುವರೆದುಕೊಂಡು ಬರುತ್ತಿದ್ದು ಪ್ರಸ್ತುತ 71ನೇ ಪೀಠಾಧಿಪತಿಗಳಾಗಿ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳು ಪೀಠಾಸೀನರಾಗಿದ್ದಾರೆ ಹಾಗೂ ಪೀಠಕ್ಕೆ ಶ್ರೀ ಅಭಿನವ ಶಂಕರ ಭಾರತೀ ಸ್ವಾಮಿಗಳು 72ನೇ ಶಂಕರಾಚಾರ್ಯರಾಗಲಿದ್ದಾರೆ.
ಶ್ರೀ ಶಂಕರ ಭಗವತ್ಪಾದರು ಶೃಂಗೇರಿಯಲ್ಲಿ ದಕ್ಷಿಣಾಮ್ನಾಯ ಪೀಠವನ್ನು ಸ್ಥಾಪಿಸಿ, ಅದಕ್ಕೆ ಮೊದಲನೆಯ ಪೀಠಾಧಿಪತಿಗಳನ್ನಾಗಿ ಸುರೇಶ್ವರಾಚಾರ್ಯರನ್ನು ನೇಮಿಸಿದರು. ಶ್ರೀ ಸುರೇಶ್ವರಾಚಾರ್ಯರಿಂದ ಕ್ರಿ.ಶ. ೧೫೪೬ರ ವರೆಗೆ (ಶ್ರೀ ತೃತೀಯ ನರಸಿಂಹ ಭಾರತಿಸ್ವಾಮಿಗಳವರೆಗೆ) ಪೀಠಾಧಿಪತಿಗಳಾಗಿದ್ದ ನಲವತ್ತೇಳು ಜನರು ಶೃಂಗೇರಿ ಜಗದ್ಗುರು ಪೀಠವನ್ನು ಆಳಿದರು. (ಆಧಾರ: ಕೂಡಲಿ ಮಠದ ಸಂಕ್ಷಿಪ್ತ ಇತಿಹಾಸ: ಲೇಖಕ ವಿಷ್ಣುತೀರ್ಥ)
ಶ್ರೀ ತೃತೀಯ ನರಸಿಂಹ ಭಾರತಿಗಳ ಸದರಿ ತೃತೀಯ ನರಸಿಂಹ ಭಾರತಿಗಳು ಕ್ರಿ.ಶ. 1546ಲ್ಲಿ ಅಂದರೆ ಶಾಲಿವಾಹನ ಶಕ 1468ಲ್ಲಿ ಶ್ರೀ ಶೃಂಗೇರಿ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾದರು. ಇವರ ಅಧಿಕಾರಾವಧಿಯಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಕ್ರಿ.ಶ. 1551ಲ್ಲಿ ಅವರು ತಮ್ಮ ಶಿಷ್ಯರೊಬ್ಬರಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟು, ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳೆಂದು ನಾಮಕರಣ ಮಾಡಿದರು. ಅನಂತರ ಕ್ರಿ.ಶ. 1557ಲ್ಲಿ (ಶಾಲಿವಾಹನ ಶಕೆ 1479ನೇ ನಳ ಸಂವತ್ಸರ) ಶೃಂಗೇರಿ ಪೀಠದ ಆಡಳಿತ ಸೂತ್ರವನ್ನು ತಮ್ಮ ಶಿಷ್ಯರಾದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳಿಗೆ ವಹಿಸಿ, ಶ್ರೀ ತೃತೀಯ ನರಸಿಂಹ ಭಾರತಿಗಳು ಉತ್ತರಭಾರತಕ್ಕೆ ತೀರ್ಥಯಾತ್ರೆ ಹೊರಟರು. ಬಹಳ ಕಾರಣಗಳಿಂದ ಇವರ ತೀರ್ಥಯಾತ್ರೆಯು ಸುಮಾರು ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲದವರೆಗೆ ನಡೆಯಬೇಕಾಯಿತು.