ಶ್ರೀ ಸಚ್ಚಿದಾನಂದ ಶಂಕರ ಭಾರತೀ ವೇದ ಭವನ

ವಾರಾಣಸಿ (ಕಾಶಿ)

ಕಾಶೀ ನಗರವು ವೇದ ಶಾಸ್ತ್ರಗಳ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದರೂ ಕೂಡ, ಕಳೆದ ೫೦ ವರ್ಷಗಳಲ್ಲಿ ಎಲ್ಲ ಗುರುಕುಲಗಳು ಸರ್ಕಾರದ ಶಿಕ್ಷಣ ಇಲಾಖೆ ಅಥವಾ ಸಂಸ್ಕೃತ ವಿಶ್ವವಿದ್ಯಾಲಯಗಳ ತೆಕ್ಕೆಗೆ ಸೇರಿ ಮೆಕಾಲೆ ಪದ್ಧತಿಯ ಪಾಠ್ಯಕ್ರಮದ ಹೇರಿಕೆ ಆಗಿದೆ. ಸರ್ಕಾರವು ಸ್ವಾಧೀನಪಡಿಸಿಕೊಂಡು ಮೆಕಾಲೆ ಪದ್ಧತಿಯ ಪಾಠ್ಯಕ್ರಮವನ್ನು ಹೇರಿರುವುದರಿಂದ, ಪಾರಂಪರಿಕವಾಗಿ ನಡೆಯುತ್ತಿದ್ದ ವೇದಾಧ್ಯಯನವು ಕಾಶಿಯಲ್ಲಿಯೇ ವಿನಾಶದ ಅಂಚಿಗೆ ತಲುಪಿದೆ. ಈ ರೀತಿಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು "ಶಾಸ್ತ್ರೀ", "ಆಚಾರ್ಯ" ಮುಂತಾದ ಹೆಸರಿನ ಡಿಗ್ರೀ ಪಡೆದುಕೊಂಡುಬಿಟ್ಟಿರುತ್ತಾರೆ, ಆದರೆ ಪರಂಪರೆಯ ರೀತ್ಯಾ ಕಲಿತ ವಿದ್ಯಾರ್ಥಿಗಳ ಹಾಗೆ ಅವರಲ್ಲಿ ಸಮಗ್ರತೆ ಮತ್ತು ವಿದ್ವತ್ತು ಕಂಡುಬರುವುದಿಲ್ಲ. ಸರಕಾರಿ ಪಾಠ್ಯಕ್ರಮದಲ್ಲಿ ಪರಂಪರೆಗೆ ಮಹತ್ವ ನೀಡಿರುವುದಿಲ್ಲ, ಇದರಿಂದ ಪಾರಂಪರಿಕ ವಿದ್ವಾಂಸರ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದೆ. ಹಾಗಾಗಿ ಷಡಂಗ ಸಹಿತವಾಗಿ, ಶ್ರೌತ ಪ್ರಯೋಗ ಹಾಗೂ ಧರ್ಮಶಾಸ್ತ್ರ ಸಹಿತವಾಗಿ ಪಾರಂಪರಿಕ ವೇದಾಧ್ಯಯನವವನ್ನು ಮಾಡಿಸಿ ಉತ್ತಮ ವೈದಿಕ ವಿದ್ವಾಂಸರನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೂಡಲೀ ಶೃಂಗೇರೀ ಮಹಾ ಸಂಸ್ಥಾನವು ಕಾಶಿಯಲ್ಲಿರು ಮಣಿಕರ್ಣಿಕಾ ಘಾಟ್‌ ನ ಬಳಿ ವೇದಭವನವನ್ನು ಪ್ರಾರಂಭಿಸಿದೆ. ಮಹಾ ಸಂಸ್ಥಾನದ ೬೮ನೇ ಪೀಠಾಧಿಪತಿಗಳಾಗಿದ್ದ ಶ್ರೀ ಸಚ್ಚಿದಾನಂದ ಶಂಕರ ಭಾರತೀಗಳ ಸಂಸ್ಮರಣೆಗಾಗಿ ಈ ಗುರುಕುಲಕ್ಕೆ ಸಚ್ಚಿದಾನಂದ ಶಂಕರ ಭಾರತೀ ವೇದ ಭವನ ಎಂದು ಹೆಸರಿಸಲಾಗಿದೆ.

ಸದರಿ ವೇದ ಭವನದಲ್ಲಿ ಪ್ರಸ್ತುತ 20 ಜನ ವಿದ್ಯಾರ್ಥಿಗಳು ಇದ್ದು, ಮೂರು ಜನ ಆಚಾರ್ಯರು ಇರುತ್ತಾರೆ. ಇಲ್ಲಿ ವಿದ್ಯಾರ್ಥಿಗಳ ವಸತಿ ಹಾಗೂ ಶಿಕ್ಷಣವು ಸಂಪೂರ್ಣ ಉಚಿತವಾಗಿರುತ್ತದೆ. ಈ ಗುರುಕುಲದಲ್ಲಿ ಎಲ್ಲರೂ ಯಾವಾಗಲೂ ಸಂಸ್ಕೃತ ಭಾಷೆಯಲ್ಲಿಯೇ ಮಾತನಾಡುತ್ತಾರೆ. ವಿದ್ಯಾರ್ಥಿಗಳು ವೇದಾಧ್ಯಯನದ ಜೊತೆಗೆ, ನಿತ್ಯ ಅಗ್ನಿಹೋತ್ರ, ಶ್ರೌತ ಯಜ್ಞಗಳು ಇತ್ಯಾದಿಗಳ ಪ್ರಾಯೋಗಿಕ ಚಟುವಟಿಕೆಗಳನ್ನು ಕೂಡ ಮಾಡುತ್ತಾರೆ.