ಶ್ರೀ ವಿದ್ಯಾಭಿನವ ವಾಲುಕೇಶ್ವರ ಭಾರತೀ ಗುರುಕುಲ

ಕೂಡಲಿ, ಶಿವಮೊಗ್ಗ

ದಕ್ಷಿಣಾಮ್ನಾಯ ಶಾರದಾ ಪೀಠದ 67ನೇ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಭಿನವ ವಾಲುಕೇಶ್ವರ ಸ್ವಾಮಿಗಳ ಸ್ಮರಣಾರ್ಥವಾಗಿ ಈ ವೇದ ಪಾಠಶಾಲೆಯನ್ನು 2023ರ ಗುರುಪೂರ್ಣಿಮೆಯಂದು ಪ್ರಾರಂಭಿಸಲಾಯಿತು. ಸ್ವಾಮಿಗಳು ತಮ್ಮ ಪೂರ್ವಾಶ್ರಮದಲ್ಲಿ “ಹಾನಗಲ್‌ ವಿರೂಪಾಕ್ಷ ಶಾಸ್ತ್ರಿಗಳು” ಎಂದು ಪ್ರಸಿದ್ಧಿ ಹೊಂದಿದ್ದರು ಹಾಗೂ, ಡಿವಿಜಿ, ದೇವುಡು ನರಸಿಂಹ ಶಾಸ್ತ್ರಿ ಮುಂತಾದ ಗಣ್ಯರಿಗೆ ಶಾಸ್ತ್ರಪಾಠವನ್ನು ಮಾಡಿದ್ದು ಮಾತ್ರವಲ್ಲದೇ, ಶೃಂಗೇರಿಯ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳಿಗೆ ಹಾಗೂ ಹೊಳೆನರಸೀಪುರದ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಸ್ಥಾಪಕರಾದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳಿಗೆ ಕೂಡ ಪಾಠ ಮಾಡಿದವರಾಗಿದ್ದರು. ಅಂತಹ ಮಹನೀಯರ ಸ್ಮರಣಾರ್ಥವಾಗಿ, ನಾಲ್ಕು ವೇದಗಳು, ಆರು ವೇದಾಂಗಗಳು, ಆರು ಶಾಸ್ತ್ರಗಳು ಹಾಗೂ ಇತರೆ ಎಲ್ಲ 18 ವಿದ್ಯೆಗಳನ್ನು ಕಲಿಸುವದಕ್ಕಾಗಿ ಎಲ್ಲಾ ಶಾಖೆಗಳ ಅಧ್ಯಯನಾವಕಾಶವೂ ಇರುವ ಸಮಗ್ರ ವೈದಿಕ ಪಾಠಶಾಲೆಯನ್ನು ಪ್ರಾರಂಭಿಸಲಾಯಿತು. ಈಗ ಎರಡು ವೇದಗಳ ಅಧ್ಯಯನ ನಡೆಯುತ್ತಾ ಇದೆ.

ವೇದದ ಸಂಹಿತೆ, ಬ್ರಾಹ್ಮಣ ಹಾಗೂ ಆರಣ್ಯಕವೆಂಬ ಮೂರು ಗ್ರಂಥಗಳು ಹಾಗೂ ಉಪನಿಷತ್ತುಗಳನ್ನು ಆರು ವೇದಾಂಗಗಳ ಸಹಿತವಾಗಿ ಸಂಪೂರ್ಣ ಕಂಠಪಾಠ ಮಾಡುವ ಪ್ರಾಚೀನ ಅಧ್ಯಯನ ಕ್ರಮವು ನಶಿಸಿ ಹೋಗುತ್ತಿದೆ. ಕೇವಲ ಪೂಜೆಗೆ ಬೇಕಾಗುವ ನಾಲ್ಕಾರು ಮಂತ್ರಗಳನ್ನು ಕಲಿಸುವುದು ಈ ಗುರುಕುಲದ ಉದ್ದೇಶವಾಗಿರುವುದಿಲ್ಲ. ಬದಲಿಗೆ ಮುಂದಿನ ಪೀಳಿಗೆಯ ಶ್ರೇಷ್ಠ ವೈದಿಕ ವಿದ್ವಾಂಸರನ್ನು ತಯಾರಿಸುವುದು ಹಾಗೂ ಸಮಾಜಕ್ಕೆ ಇಂದಿನ ಕಾಲಕ್ಕೆ ಅಗತ್ಯವಾಗಿರುವ ಸಾಂಸ್ಕೃತಿಕ ಮಾರ್ಗದರ್ಶನ ನೀಡುವ ಯುವಜನತೆಯನ್ನು ತಯಾರಿಸುವುದು ಈ ಸಂಸ್ಥೆಯ ಧ್ಯೇಯವಾಗಿರುತ್ತದೆ.

ಇಲ್ಲಿ ಶಿಕ್ಷಣವು ಸಂಪೂರ್ಣ ನಿಃಶುಲ್ಕವಾಗಿರುತ್ತದೆ ಹಾಗೂ ಸಮಾಜದ ಸಹಯೋಗದಿಂದಲೇ ಈ ಪಾಠಶಾಲೆಯು ನಡಯುತ್ತದೆ. ಸರ್ಕಾರದಿಂದ ಯಾವುದೇ ಆರ್ಥಿಕ ಸಹಕಾರವು ಗುರುಕುಲಕ್ಕೆ ಇರುವುದಿಲ್ಲ. ಈ ಪಾಠಶಾಲೆಯಲ್ಲಿ ಒಂದು ವೇದವನ್ನು ಆರು ಅಂಗಗಳ ಸಹಿತವಾಗಿ ಘನಾಂತದ ವರೆಗೆ ಅಧ್ಯಯನ ಮಾಡಲು 12 ವರ್ಷಗಳ ಸಮಯ ಬೇಕಾಗುತ್ತದೆ. ಅಷ್ಟು ಸಮಯವನ್ನು ಗುರುಕುಲದಲ್ಲಿ ಕಳೆಯಲು ಸಾಧ್ಯವಿಲ್ಲದವರಿಗಾಗಿ ಉಪಯುಕ್ತ ಮಂತ್ರಭಾಗ ಹಾಗೂ ಸಂಸ್ಕೃತ ಕಲಿಸುವ 2 ವರ್ಷಗಳ ಡಿಪ್ಲೊಮಾ ಕೂಡ ಲಭ್ಯವಿದೆ. 6 ವರ್ಷಗಳಲ್ಲಿ ನ್ಯಾಯ ಇತ್ಯಾದಿ ಯಾವುದಾದರೂ ಒಂದು ಶಾಸ್ತ್ರವನ್ನು ಅಧ್ಯಯನ ಮಾಡಬಹುದಾಗಿದೆ. ಗುರುಕುಲದಲ್ಲಿರುವ ವಿದ್ಯಾರ್ಥಿಗಳು ಹತ್ತಿರದಲ್ಲಿರುವ ಶಾಲೆ ಕಾಲೇಜುಗಳ ಅಥವಾ NIOS ಪರೀಕ್ಷೆ ಬರೆದು ಸರ್ಟಿಫಿಕೇಟ್ ಪಡೆಯಬಹುದಾಗಿದೆ.